NEWS

ಮುಂಗಾರು ಮಳೆಯಾದ್ರೂ ರೈತರ ಮೊಗದಲ್ಲಿ ಮೂಡದ ಮಂದಹಾಸ, ಕಾರಣ ಏನು ಗೊತ್ತಾ?

ಕೃಷಿಕರು ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸಿದರೂ ರೈತನ ಮೊಗದಲ್ಲಿ ಮುಂದಹಾಸ ಮೂಡಿಲ್ಲ. ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಯಾಗ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಅಗತ್ಯ ಬಿತ್ತನೆ ಬೀಜ ಕೈಗೆಟುಕೋ ದರದಲ್ಲಿ ಸಿಗದೇ ಇರೋದು. ಇದ್ರ ಜೊತೆಗೆ ಗೊಬ್ಬರದ ಕೊರತೆಯೂ ರೈತರನ್ನು ಕಂಗೆಡುವಂತೆ ಮಾಡಿದೆ. ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗ್ತಿದೆ. ಬರದಿಂದ ತತ್ತರಿಸಿದ್ದ ಧಾರವಾಡ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಿದ್ದು, ಮುಂಗಾರು ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಆದರೆ ಉತ್ತಮ ಮಳೆಯಾಗಿದ್ರೂ ರೈತನ ಮೊಗದಲ್ಲಿ ಮಂದಹಾಸ ಮೂಡಿಲ್ಲ. ಒಂದು ಕಡೆ ಬಿತ್ತನೆ ಬೀಜದ ದರ ಏರಿಕೆಯಾಗಿದ್ರೆ, ಮತ್ತೊಂದು ಕಡೆ ದುಬಾರಿ ದರ ಕೊಟ್ಟರೂ ಸಿಗದ ಬೀಜ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲಕ್ಕೂ ಮುಖ್ಯವಾಗಿ ರಸಗೊಬ್ಬರ ಸಿಗದೇ ಇರೋದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ರೈತರಿಗೆ ದರ ಏರಿಕೆಯ ಶಾಕ್ ಆಗಿದೆ. ಬರದ ಬೆನ್ನಲ್ಲೇ ಅನ್ನದಾತರಿಗೆ ಬಿತ್ತನೆ ಬೀಜ ದರ ಏರಿಕೆ ಆಘಾತವಾಗಿದೆ. ರಿಯಾಯಿತಿ ದರದ ಬೀಜದಲ್ಲೂ ಭಾರೀ ಹೆಚ್ಚಳವಾಗಿದೆ. ಪ್ರತಿ 5 ಕೆಜಿ ಚೀಲಕ್ಕೂ ದರ ಏರಿಕೆ ಕಳೆದ ವರ್ಷ ತೀವ್ರ ಬರ ಎದುರಿಸಿದ್ದ ರೈತ, ಈ ಬಾರಿ ಉತ್ತಮ ಮಳೆಯಾಗಿದೆ ಅನ್ನೋ ಖುಷಿಯಲ್ಲಿದ್ದ. ಆದರೆ ಸರ್ಕಾರದ ರಿಯಾಯಿತಿ ಬಿತ್ತನೆ ಬೀಜದ ದರದಲ್ಲಿ ಭಾರಿ ಏರಿಕೆಯಾಗಿದೆ. ಹೆಸರು, ಉದ್ದು, ಶೇಂಗಾ, ತೊಗರಿ, ಸೋಯಾಬಿನ್, ಮೆಕ್ಕೆಜೋಳ ಇತ್ಯಾದಿ ಬಿತ್ತನೆಗೆ ಜಿಲ್ಲೆಯ ರೈತ ಮುಂದಾಗಿದ್ದಾನೆ. 5 ಕೆಜಿ ಪ್ಯಾಕೇಟ್ ಚೀಲದ ದರ 60 ರಿಂದ 304 ರೂ. ವರೆಗೆ ಹೆಚ್ಚಳವಾಗಿದೆ. ಕಳೆದ ವರ್ಷ ಪ್ರತಿ ಕೆ.ಜಿ. ಹೆಸರಿಗೆ 100 ರೂಪಾಯಿ ದರವಿತ್ತು. ಈ ವರ್ಷ ಹೆಸರು ಪ್ರತಿ ಕೆಜಿಗೆ 161 ರೂಪಾಯಿಯಾಗಿದೆ. ಪ್ರತಿ ಕೆಜಿಗೆ 89 ರೂಪಾಯಿ ಇದ್ದ ಉದ್ದು ಈ ವರ್ಷ 132 ರೂಪಾಯಿಗೆ ಏರಿಕೆಯಾಗಿದೆ. 105 ರೂಪಾಯಿ ಇದ್ದ ತೊಗರಿ ದರ 153 ಕ್ಕೆ ಏರಿಕೆಯಾಗಿದೆ. ಶೇಂಗಾ ಮತ್ತು ಮೆಕ್ಕೆಜೋಳ ಬೀಜದ ದರದಲ್ಲಿಯೂ ಏರಿಕೆ ಕಂಡಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಗೊಬ್ಬರದ ತೀವ್ರ ಅಭಾವ ಸೃಷ್ಟಿ ಇದ್ರ ಜೊತೆ ಸರ್ಕಾರದ ಕಂಡೀಷನ್ ಬೇರೆ. 5 ಎಕರೆ ಭೂಮಿಗೆ ಮಾತ್ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಸಿಗಲಿದೆ. ಉಳಿದ ಬೀಜ ಮಾರುಕಟ್ಟೆಯಲ್ಲಿ ಖರೀದಿ ಮಾಡೋ ಅನಿವಾರ್ಯತೆ ಎದುರಾಗಿದೆ. ಬೀಜದ ಜೊತೆಗೆ ಗೊಬ್ಬರದ ತೀವ್ರ ಅಭಾವ ಸೃಷ್ಟಿಯಾಗಿದೆ. ಬಿತ್ತನೆಗೆ ಬೇಕಿರೋ ಡಿಎಪಿ ಗೊಬ್ಬರಕ್ಕೆ ರೈತರ ಪರದಾಡುವಂತಾಗಿದೆ. ಕಳೆದ ವರ್ಷದ ಬರಗಾಲದ ಎಫೆಕ್ಟ್ ನಿಂದ ಬೀಜದ ದರ ಏರಿಕೆ ಅಂತ ಸರ್ಕಾರ ಸಮರ್ಥಿಸಿಕೊಳ್ತಿದೆ. ಆದರೆ ಮುಂಗಾರು ಮಳೆಯ ಲಾಭವಾಗಬೇಕಂದ್ರೆ ರೈತ ಸಕಾಲಕ್ಕೆ ಬಿತ್ತಬೇಕು. ಉಚಿತ ಗ್ಯಾರಂಟಿಗಳ ಬಗ್ಗೆ ಮಾತನಾಡೋ ಸರ್ಕಾರ ಬೀಜ ಮತ್ತು ಗೊಬ್ಬರ ದರ ಕಡಿಮೆ ಮಾಡಬೇಕು. ಬಿತ್ತನೆಗೆ ಅಗತ್ಯವಿರುವಷ್ಟು ಬೀಜ–ಗೊಬ್ಬರ ಪೂರೈಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.