KANNADA

ಗಣಿತ ಲೋಕದ ಗಣಿ ಶ್ರೀನಿವಾಸ ರಾಮಾನುಜನ್; 'ಗಣಿತ ಭಾಸ್ಕರ'ನ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್‌ ಸಂಗತಿಗಳು!!

Ganita Bhaskara Srinivasa Ramanujan: ಗಣಿತ ಕಬ್ಬಿಣದ ಕಡಲೆ ಎಂಬುವವರಿಗೆ 'ಗಣಿತ ಭಾಸ್ಕರʼ ಖ್ಯಾತಿಯ ಶ್ರೀನಿವಾಸ ರಾಮನುಜನ್ ಹೆಸರೇ ಪ್ರೇರಣಾ ಶಕ್ತಿ. ಭಾರತದ ಪ್ರಸಿದ್ಧ ಗಣಿತಜ್ಞರು, ಸಣ್ಣ ವಯಸ್ಸಿನಿಂದಲೇ ಅಸಾಧಾರಣ ಪ್ರತಿಭೆ ತೋರಿದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆಯದ ಸ್ವ-ಶಿಕ್ಷಕ ಗಣಿತಜ್ಞರು ಆಗಿದ್ದು, ಮುಖ್ಯವಾಗಿ ಸಂಖ್ಯಾಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ ರಾಮಾನುಜನ್ ಅನೇಕ ಸಂಕಲನ ಸೂತ್ರಗಳನ್ನು ಪ್ರತಿಪಾದಿಸಿದ್ದಕ್ಕಾಗಿ ವಿಶೇಷವಾಗಿ ಪ್ರಸಿದ್ಧರು. ಇಂದಿನ ಮದ್ರಾಸ್ ಪ್ರಾಂತ್ಯದ (ಈಗಿನ ತಮಿಳುನಾಡಿನ) ಕೊಯಂಬತ್ತೂರು ಜಿಲ್ಲೆಯ ಈರೋಡಿನಲ್ಲಿ 22ನೇ ಡಿಸೆಂಬರ್ 1877ರಂದು ಸರ್ವಜಿತ್ ಸಂವತ್ಸರದ ಮಾರ್ಗಶಿರ ಶುಕ್ಲ ನವಮಿಯಂದು ತಾಯಿಯ ತವರು ಮನೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಕೋಮಲತ್ತಮ್ಮಾಳ್ ಆರ್ಥಿಕವಾಗಿ ಅಷ್ಟು ಸದೃಢವಲ್ಲದ ಮಧ್ಯಮ ವರ್ಗದ ಶ್ರೀವೈಷ್ಣವ ಕುಟುಂಬಕ್ಕೆ ಸೇರಿದವರು. ಇವರ ಮೂವರು ಮಕ್ಕಳಲ್ಲಿ ರಾಮಾನುಜನ್‌ರೇ ಜ್ಯೇಷ್ಠ ಪುತ್ರ. ಲಕ್ಷ್ಮೀ ನರಸಿಂಹನ್ ಮತ್ತು ತಿರುನಾರಾಯಣನ್ ಎಂಬ ಇಬ್ಬರೂ ಇವರ ತಮ್ಮಂದಿರು. ವಿಶ್ವವಿಖ್ಯಾತ ಗಣಿತ ಪ್ರತಿಭೆ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್‌ರವರ 125ನೇ ಜನ್ಮ ವರ್ಷವಾದ 2012ನ್ನು ಭಾರತ ಸರ್ಕಾರ ‘ರಾಷ್ಟ್ರೀಯ ಗಣಿತ ವರ್ಷʼ ಎಂದು ಘೋಷಿಸಿದೆ. ಇದು ನಿಜಕ್ಕೂ ಮಹತ್ವಪೂರ್ಣವಾಗಿದ್ದು, ರಾಷ್ಟ್ರದಾದ್ಯಂತ ಗಣಿತವನ್ನು ಜನಸಮುದಾಯದಲ್ಲಿ ಜನಪ್ರಿಯಗೊಳಿಸಲು ಹಾಗೂ ರಾಮಾನುಜನ್ ಅವರ ಜೀವನ ಮತ್ತು ಕೊಡುಗೆಗಳನ್ನು ಪರಿಚಯಿಸಲು ದೇಶ ಬಹಳ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಗಣಿತಜ್ಞನ ಬಾಲ್ಯ ಹೇಗಿತ್ತು? ರಾಮಾನುಜನ್‌ರ ವಿದ್ಯಾಭ್ಯಾಸವು ಕುಂಭಕೋಣಂನ ಸರ್ಕಾರಿ ಪ್ರೌಢಶಾಲೆಯಲ್ಲೂ ಅನಂತರ ಅಲ್ಲಿಯ ಸರ್ಕಾರಿ ಕಾಲೇಜಿನಲ್ಲೂ ಕೈಗೊಂಡರು, ಇವರು ಚಿಕ್ಕಂದಿನಿಂದಲೂ ಬಹಳ ಮಿತಭಾಷಿಯೂ, ಅಂತರ್ಮುಖಿಯೂ ಆಗಿದ್ದು, ತನ್ನ ಸಹಪಾಠಿಗಳೊಂದಿಗೆ ಹೆಚ್ಚು ಸೇರುತ್ತಿರಲಿಲ್ಲ. ಒಮ್ಮೆ ರಾಮಾನುಜನ್ ಪ್ರಾಥಮಿಕ ತರಗತಿಯಲ್ಲಿದ್ದಾಗ ಉಪಾಧ್ಯಾಯರು ‘ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಭಾಗಲಬ್ಧವು ಒಂದು ಆಗುತ್ತದೆ’ ಎಂದು ವಿವರಿಸಿದಾಗ, ಪುಟ್ಟ ವಿದ್ಯಾರ್ಥಿ ರಾಮಾನುಜನ್ ತಕ್ಷಣ ನಿಂತು ಕೇಳಿದ ಪ್ರಶ್ನೆ ‘ಹಾಗಾದರೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಏನು ಬರುತ್ತದೆ?.’ ತಬ್ಬಿಬ್ಬಾದ ಗುರುಗಳು ಏನೆಂದು ಉತ್ತರಿಸಿದ್ದು ಈಗ ಅಪ್ರಸ್ತುತ. ರಾಮಾನುಜನ್ ಕೇಳುತ್ತಿದ್ದ ಪ್ರಶ್ನೆಗಳು ಬಹಳ ಅರ್ಥಪೂರ್ಣವೂ ಉಚ್ಚಮಟ್ಟದ್ದಾಗಿದ್ದರೂ ಕೂಡ ಅವರು ಎಂದೂ ಕುಚೋದ್ಯ ಮಾಡಿದವರಲ್ಲ, ಇನ್ನೂ ಅಹಂಕಾರ ಎಂಬುದು ಅವರ ಬಳಿ ಎಂದೂ ಸುಳಿದಿದ್ದೇ ಇಲ್ಲ, ರಾಮಾನುಜನ್‌ರವರು ತಮ್ಮ ಜೀವನದಲ್ಲಿ ಅತ್ಯಂತ ಸರಳತೆಯ, ಮುಗ್ಧತೆಯ ಮತ್ತು ನಮ್ರತೆಯ ಸಾಕಾರಮೂರ್ತಿಯಾಗಿದ್ದರು. ರಾಮಾನುಜನ್‌ರವರಿಗೆ ಬಹಳ ಸ್ಫೂರ್ತಿಯನ್ನಿತ್ತು ಆತನ ಗಣಿತ ಪ್ರತಿಭೆಯನ್ನು ವಿಕಾಸಗೊಳಿಸಿದ್ದು GS ಕಾರ್ ಎಂಬಾತನ ‘ಸಿನೋಪ್ಸಿಸ್ ಆಫ್ ಪ್ಯೂರ್ ಮ್ಯಾಥಮೆಟಿಕ್ಸ್’ ಎಂಬ ಗ್ರಂಥ, ಇದು ಗಣಿತ ಸೂತ್ರಗಳ ಹಾಗೂ ಕೇವಲ ಫಲಿತಾಂಶಗಳ ಒಂದು ಸಂಕಲನವೇ ಹೊರತು ಗಣಿತ ಶಾಸ್ತ್ರದ ಯಾವುದೇ ಒಂದು ಶಾಖೆಯನ್ನು ಶಾಸ್ತ್ರೀಯವಾಗಿ ವಿವೇಚಿಸಿ ಅಧ್ಯಯನ ಮಾಡುವ ಪಠ್ಯಪುಸ್ತಕವಾಗಲಿ, ಸಂಶೋಧನಾ ಗ್ರಂಥವಾಗಲಿ ಅಲ್ಲ. ಆದರೆ SSLCಯಲ್ಲಿ ಓದುತ್ತಿದ್ದ ರಾಮಾನುಜನ್ ಆ ಪುಸ್ತಕವನ್ನು ಗಣಿತದ ಅದ್ಭುತವಾದ ತತ್ವಗಳ ಒಂದು ಮಹಾಗಣಿಯೆಂದೇ ಪರಿಗಣಿಸಿದರು. ಅದರಿಂದ ಒಂದೊಂದು ಫಲಿತಾಂಶವು ರಾಮಾನುಜನ್‌ರವರಿಗೆ ಒಂದೊಂದು ಸಂಶೋಧನಾ ಸಮಸ್ಯೆಯಾಗಿಯೇ ತೋರಿತು. ಅಂತಹ ಸಮಸ್ಯೆಗಳನ್ನು ಯಾರ ಸಹಾಯವೂ ಇಲ್ಲದೇ ತನ್ನ ಸ್ವಂತಿಕೆಯಿಂದಲೇ ಬಿಡಿಸುವ ತನಕ ಸಮಾಧಾನಗೊಳ್ಳದ ಹಠ ರಾಮಾನುಜನ್‌ರವರದ್ದು, ಈ ವಿಶೇಷವಾದ ಸಾಧನೆಯಲ್ಲಿ ಬೌದ್ಧಿಕ ಸಾಹಸವನ್ನು ಕೈಗೊಂಡ ರಾಮಾನುಜನ್ ತನ್ನದೇ ಆದ ಒಂದು ವಿಲಕ್ಷಣವಾದ ಸಂಶೋಧನಾ ಮಾರ್ಗವನ್ನು ರೂಪಿಸಿಕೊಳ್ಳಬೇಕಾಯಿತು. ಪ್ರತಿಭೆಯ ಈ ಘಟ್ಟದಲ್ಲಿ ರಾಮಾನುಜನ್‌ರವರು SSLCಯಲ್ಲಿ ಓದುತ್ತಿದ್ದ ಒಬ್ಬ ಓರ್ವ ಬಡ ವಿದ್ಯಾರ್ಥಿ ಎಂಬುದನ್ನು ನಾವು ಮರೆಯಬಾರದು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವೇಳೆಗಾಗಲೇ 1903ರಲ್ಲಿ ತನ್ನದೇಯಾದ ರೀತಿಯಲ್ಲಿ ಪರಿಶ್ರಮ ಹಾಗೂ ಪರಿಣಿತಗಳಿಂದ ಮಾಯಾಚೌಕ (Magic Squares) ರೇಖಾ ಗಣಿತದ ಕ್ಲಿಷ್ಟ ಸಮಸ್ಯೆಗಳು, ಬೀಜಗಣಿತದ ವಿಧಾನಗಳು, ಕಲನಶಾಸ್ತ್ರ (Calculus) ಗಣಿತ ವಿಶ್ಲೇಷಣಾ ಶಾಸ್ತ್ರ (Analysis) ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ರಾಮಾನುಜನ್ ಬೆಳೆಸಿಕೊಂಡಿದ್ದರು. ಅನಂತರ 1904ರಲ್ಲಿ ಕುಂಭಕೋಣಂನ ಸರ್ಕಾರಿ ಕಾಲೇಜಿನಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದ ರಾಮಾನುಜನ್ ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಮೀಸಲಾಗಿದ್ದ ‘ಸುಬ್ರಹ್ಮಣ್ಯಂ ಸ್ಕಾಲರ್ಷಿಪ್’ ಗಳಿಸಿಕೊಂಡರು. ಇದರಿಂದಾಗಿ ತನ್ನ ಹೊಟ್ಟೆ, ಬಟ್ಟೆ ಮತ್ತು ಪುಸ್ತಕಗಳ ಖರ್ಚನ್ನು ನಿರ್ವಹಿಸಲು ಬಹಳ ಮಟ್ಟಿಗೆ ಸಹಾಯವಾಯಿತು. ಆದರೆ ತನ್ನಲ್ಲಿದ್ದ ಆಸಕ್ತಿಯನ್ನು ಏಕೈಕ ವಿಷಯದತ್ತ ಅದು ಆತನ ತರಗತಿಯ ಮಟ್ಟಕ್ಕಿಂತ ಬಹಳ ಉನ್ನತಸ್ತರದ ಗಣಿತದತ್ತ ಕೇಂದ್ರೀಕರಿಸಿದ ಫಲವಾಗಿ ಇತರ ವಿಷಯಗಳಲ್ಲಿ ಸಾಕಷ್ಟು ಆಸಕ್ತಿಯನ್ನು ತೋರದೆ F.A (ಈಗಿನ ಪಿಯುಸಿ)ಯಲ್ಲಿ ಅನುತ್ತೀರ್ಣರಾದರು. ರಾಮಾನುಜನ್‌ಗೆ 1909ರಲ್ಲಿ ಕೇವಲ 9 ವರ್ಷಗಳ ಪುಟ್ಟ ಬಾಲಕಿಯಾದ ಜಾನಕಿಯೊಂದಿಗೆ ವಿವಾಹವಾಯಿತು. ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟು ಹೊಟ್ಟೆಪಾಡಿಗಾಗಿ ಯಾವ ಕೆಲಸವೂ ಸಿಗದಿದ್ದರೂ ರಾಮಾನುಜನ್ ಸತತವಾಗಿ ಉಚ್ಛಮಟ್ಟದ ಗಣಿತ ಸಂಶೋಧನೆಯಲ್ಲೇ ತೊಡಗಿ ತಾನು ಸಾಧಿಸಿದ ಫಲಿತಾಂಶಗಳನ್ನು ತನ್ನ ಒಂದು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಲಾರಂಭಿಸಿದರು. ದಕ್ಷಿಣ ಆರ್ಕಾಟ್ ಜಿಲ್ಲೆಯ ತಿರುಕೊಯಿಲೂರಿನಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿದ್ದ ವಿ.ರಾಮಸ್ವಾಮಿ ಅಯ್ಯರ್ ಹಾಗೂ ರಾಮಾನುಜನ್‌ನ ಪ್ರತಿಭೆಯನ್ನು ಈಗಾಗಲೇ ತಿಳಿದುಕೊಂಡಿದ್ದ ಕುಂಭಕೋಣಂನ ಕಾಲೇಜಿನ ಮುಖ್ಯಸ್ಥರು, ಆನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನ ಗಣಿತ ಪ್ರಾಧ್ಯಾಪಕರೂ ಆಗಿದ್ದ ಪ್ರೊ.ಪಿ.ವಿ.ಶೇಷು ಅಯ್ಯರ್ ಇವರುಗಳ ಸಹಾಯದಿಂದ ರಾಮಾನುಜನ್‌ಗೆ ಅಕೌಂಟೆಂಟ್ ಜನರಲ್‌ರವರ ಕಛೇರಿಯಲ್ಲಿ ಒಂದು ಹಂಗಾಮಿ ಗುಮಾಸ್ತನ ಕೆಲಸವು ದೊರೆಯಿತು. ಹಂಗಾಮಿ ಗುಮಾಸ್ತಗಿರಿ ಮುಗಿದ ನಂತರ ರಾಮಾನುಜನ್ ಪುನಃ ನಿರುದ್ಯೋಗಿ, ಆದರೂ ಆತನ ಗಣಿತ ಸಂಶೋಧನೆ ಸತತವಾಗಿ ನಡೆಯುತ್ತಲೇ ಇತ್ತು. ರಾಮಾನುಜನ್ ತನ್ನ ಹಳೆಯ ಮಿತ್ರರಾದ ಸಿ.ವಿ.ರಾಜಗೋಪಾಲಾಚಾರಿ ಹಾಗೂ ಹಿತೈಷಿ ಪ್ರಾಧ್ಯಾಪಕರಾದ ಶೇಷು ಅಯ್ಯರ್ ಅವರ ಸಲಹೆಯಂತೆ ಮಿತ್ರ ಕೃಷ್ಣರಾವ್ ಮೂಲಕ ನೆಲ್ಲೂರು ಜಿಲ್ಲೆಯ ಕಲೆಕ್ಟರ್ ಆಗಿದ್ದ ದಿವಾನ್ ಬಹದ್ದೂರ್ ಆರ್.ರಾಮಚಂದ್ರರಾವ್ ಅವರನ್ನು ಭೇಟಿಯಾದರು. ರಾಯರು ಸ್ವತಃ ಗಣಿತದಲ್ಲಿ ಪರಿಶ್ರಮವನ್ನು ಹೊಂದಿದ್ದು, ಆಗ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಇವರಿಗೆ ರಾಮಾನುಜನ್‌ರವರು ತನ್ನ ಕೆಲವು ಸರಳವಾದ ಫಲಿತಾಂಶಗಳನ್ನು ತೋರಿಸಿದರು. ರಾಮಾನುಜನ್ ಒಬ್ಬ ವಿಲಕ್ಷಣ ಪ್ರತಿಭಾವಂತ ಮೇಧಾವಿ ಎಂದು ಮನಗಂಡರು. ಅವರನ್ನು ರಾಮಾನುಜನ್ ಹಂತಹಂತವಾಗಿ Elliptic Integralls, Hyper Geometric Series, Divergent Series ಮುಂತಾದವುಗಳ ಒಂದು ಅದ್ಭುತವಾದ ಗಣಿತ ಲೋಕಕ್ಕೆ ಕೊಂಡೊಯ್ದರಂತೆ ಇವುಗಳಿಂದ ಪೂರ್ತಿ ಮನಸೋತ ದಿವಾನ್ ಬಹದ್ದೂರ್ ರಾಮಚಂದ್ರರಾಯರು ರಾಮಾನುಜನ್‌ಗೆ ʼನಿನಗೆ ನನ್ನಿಂದ ಏನು ಸಹಾಯ ಬೇಕಾಗಿದೆʼ? ಎಂದು ಕೇಳಿದರಂತೆ ಅದಕ್ಕೆ ರಾಮಾನುಜನ್ ಕೊಟ್ಟ ನೇರ ಸರಳ ಉತ್ತರ ‘ನನ್ನ ಗಣಿತ ಸಂಶೋಧನೆಯನ್ನು ಮುಂದುವರಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಬದುಕಿಕೊಂಡಿರಲು ಅನ್ನದ ಸಹಾಯ ಬೇಕು ಎಂದರಂತೆ’! ರಾಮಚಂದ್ರರಾಯರ ಔದಾರ್ಯದಿಂದ 1911-12ರ ಕೆಲವು ತಿಂಗಳುಗಳ ಕಾಲ ತಾತ್ಕಾಲಿಕ ಪರಿಹಾರ ದೊರೆಯಿತು. ಈ ಸಮಯದಲ್ಲೇ ‘ಜರ್ನಲ್ ಆಫ್ ದಿ ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿ’ ಎಂಬ ಸಂಶೋಧನಾ ನಿಯತಕಾಲಿಕಕ್ಕೆ ತಮ್ಮ ಮೊಟ್ಟ ಮೊದಲ ಕೊಡುಗೆಯನ್ನು ರಾಮಾನುಜನ್ ಕಳುಹಿಸಿದರು. ಆಮೇಲೆ ಆಗಿಂದಾಗ್ಗೆ ಒಂದಾದ ಮೇಲೊಂದರಂತೆ ಅನೇಕ ಪ್ರಮುಖ ಫಲಿತಾಂಶಗಳನ್ನು, ಸಮಸ್ಯೆಗಳನ್ನು ಹಾಗೂ ಉತ್ತರಗಳನ್ನು ಕಳುಹಿಸುತ್ತಿದ್ದರು ಈ ಎಲ್ಲವೂ ಪ್ರಕಟಣೆಯಾದವು. ಭಾರತದ ಕೆಲವು ಸಂಶೋಧನಾ ಪತ್ರಿಕೆಗಳಲ್ಲಿ ತಮ್ಮ ಸಂಶೋಧನೆಗಳನ್ನು ಪ್ರಕಟಿಸಿದ ನಂತರ ಯೂರೋಪ್‌ನ ಕೆಲವು ಗಣಿತಜ್ಞರಲ್ಲಿ ಇವರ ಬಗ್ಗೆ ಆಸಕ್ತಿ ಕೆರಳಿಸಿತು. 1913ರ ಜನವರಿ 16ರಂದು ಇಂಗ್ಲೆಂಡ್‌ನ ಪ್ರಸಿದ್ಧ ಗಣಿತಜ್ಞರಾಗಿದ್ದ ಪ್ರೊ.ಜಿ.ಹೆಚ್.ಹಾರ್ಡಿರವರಿಗೆ ರಾಮಾನುಜನ್ ಬರೆದ ಪತ್ರದಲ್ಲಿ ಅನೇಕ ಸಿದ್ಧಾಂತಗಳನ್ನು ಮಂಡಿಸಿದ್ದರು. ಮೊದಲಿಗೆ ಸ್ವಲ್ಪ ಅಪನಂಬಿಕೆ ತೋರಿಸಿದರು. ಹಾರ್ಡಿ ಬೇಗನೇ ಅವರ ಪ್ರತಿಭೆಯನ್ನು ಮನಗಂಡು ಇಂಗ್ಲೆಂಡ್‌ಗೆ ಬರುವಂತೆ ಆಹ್ವಾನವಿತ್ತರು. ಮದ್ರಾಸ್ ವಿಶ್ವವಿದ್ಯಾಲಯವು ರಾಮಾನುಜನ್‌ರವರಿಗೆ ವರ್ಷಕ್ಕೆ 250 ಪೌಂಡ್‌ಗಳಂತೆ 2 ವರ್ಷಗಳ ವೇತನವನ್ನು ಹಾಗೂ ಇಂಗ್ಲೆಂಡ್‌ಗೆ ಹೋಗಲು ಹಡಗಿನ ಖರ್ಚನ್ನು ಮಂಜೂರು ಮಾಡಿತು. ಆ ವೇತನದಲ್ಲಿ ತಿಂಗಳಿಗೆ 60 ರೂಪಾಯಿಗಳನ್ನು ಕುಂಭಕೋಣಂನಲ್ಲಿದ್ದ ತನ್ನ ವೃದ್ಧ ತಾಯಿಯವರಿಗೆ ಕೊಡಬೇಕೆಂದು ವ್ಯವಸ್ಥೆ ಮಾಡಿ, ಹಾರ್ಡಿಯವರ ಸಹೋದ್ಯೋಗಿಯಾಗಿದ್ದ ಪ್ರೊ.ಇ.ಎಸ್.ನೆವಿಲ್ಲೆ ಅವರ ಜೊತೆಯಲ್ಲಿ ಮಾರ್ಚ್ 17, 1914ರಂದು ರಾಮಾನುಜನ್ ಇಂಗ್ಲೆಂಡ್‌ನತ್ತ ಹಡಗಿನಲ್ಲಿ ಪ್ರಯಾಣ ಬೆಳೆಸಿದರು. ಮಡಿವಂತಿಕೆ ಹಾಗೂ ಶಾಖಾಹಾರದ ಅಭ್ಯಾಸದಿಂದ ಬಹಳ ಉಸಿರುಗಟ್ಟುವ ಸನ್ನಿವೇಶವಿದ್ದಾಗ್ಯೂ ಈ ಕಷ್ಟಗಳಿಂದ ವಿಚಲಿತರಾಗದೆ ಕೇವಲ ತಮ್ಮ ಸಂಶೋಧನೆಯ ಮೇಲೆ ಮಾತ್ರ ಕೇಂದ್ರೀಕರಿಸಿ, ತಾವು ಕೇಂಬ್ರಿಡ್ಜ್‌ನಲ್ಲಿದ್ದ ಐದು ವರ್ಷಗಳ ಕಾಲ (1914-1919) ಬಹಳ ವಿಫುಲವಾದ, ಗಾಢವಾದ ಮತ್ತು ಅತ್ಯದ್ಭುತವಾದ ಗಣಿತ ಸಾಧನೆಯನ್ನು ಮಾಡಿದ ಹಿರಿಮೆ ರಾಮಾನುಜನ್ ಅವರದ್ದು. ಹಾರ್ಡಿ ಮತ್ತು ರಾಮಾನುಜನ್ ಸೇರಿ ಹತ್ತು ಹಲವು ಸಂಶೋಧನೆಗಳನ್ನು ಮಂಡಿಸಿದರು. ಹಲವಾರು ವರ್ಷಗಳ ನಂತರ ಸಂದರ್ಶನವೊಂದರಲ್ಲಿ ಹಾರ್ಡಿ ತಮ್ಮ ಗಣಿತ ಜೀವನದ ಎಲ್ಲಕ್ಕಿಂತ ಮುಖ್ಯ ಸಾಧನೆಯೆಂದರೆ ರಾಮಾನುಜನ್ ರವರನ್ನು ಬೆಳಕಿಗೆ ತಂದದ್ದು ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡರು. ರಾಮಾನುಜನ್‌ರವರ ಅತ್ಯುತ್ಕೃಷ್ಟವಾದ ಸಂಶೋಧನೆಗಳನ್ನು ಮೆಚ್ಚಿ ಜಗದ್ವಿಖ್ಯಾತವಾದ ಲಂಡನ್ನಿನ ರಾಯಲ್ ಸೊಸೈಟಿಯು ೧೯೧೮ ಫೆಬ್ರವರಿ ೨೮ರಂದು ‘F.R.S’ (ಫೆಲೋ ಆಫ್ ರಾಯಲ್ ಸೊಸೈಟಿ) ಎಂಬ ತನ್ನ ಅತ್ಯುನ್ನತ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಆಗ ರಾಮಾನುಜನ್‌ರವರಿಗೆ ಕೇವಲ ೩೦ ವರ್ಷಗಳು. ಈ ಮೊದಲೇ ೧೯೧೬ ಮಾರ್ಚಿಯಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ರಾಮಾನುಜನ್‌ಗೆ ಪ್ರತ್ಯೇಕವಾಗಿ ‘ಸಂಶೋಧನೆಯ ಮೂಲಕ’ ಬಿ.ಎ ಪದವಿಯನ್ನು ಕೊಟ್ಟಿತು. ತಮ್ಮ ‘F.R.S’ ಪ್ರಶಸ್ತಿಯಿಂದ ಇನ್ನೂ ಹೆಚ್ಚು ಸ್ಫೂರ್ತಿಗೊಂಡು ಸಂಪೂರ್ಣವಾಗಿ ‘ಗಣಿತ ಜೀವಿಯೇ’ ಆಗಿಬಿಟ್ಟರು. ರಾಮಾನುಜನ್ ಅವರ ಗಣಿತದ ಕಮ್ಮಟದಿಂದ ಹೊರಬರುತ್ತಿದ್ದ ಅವ್ಯಾಹತ ಧಾರೆಯಿಂದ ಅಸಂಖ್ಯಾತ ಕಣಗಳಿಂದಲೇ ಜೀವಿಸುವ ‘ಗಣಿತ ಕಣಾದರೇ’ ಆದರು. ಜೀವನವಿಡೀ ಆರೋಗ್ಯದ ತೊಂದರೆಗಳಿಂದ ಬಾಧಿತರಾಗಿದ್ದ ರಾಮಾನುಜನ್ ಅವರ ಆರೋಗ್ಯ ಲಂಡನ್ನಿನಲ್ಲಿ ಮತ್ತಷ್ಟು ಹದಗೆಟ್ಟಿತು. ಅಲ್ಲಿ ಸಸ್ಯಾಹಾರ ಸುಲಭವಾಗಿ ಸಿಗದೇ ಇದ್ದದ್ದು ಇದಕ್ಕೆ ಒಂದು ಮುಖ್ಯ ಕಾರಣ, ಜೀವಸತ್ತ್ವವಗಳ ಕೊರತೆ ಮತ್ತು ಕ್ಷಯ ರೋಗದಿಂದ ನರಳಿದ ರಾಮಾನುಜನ್ 1919ರಲ್ಲಿ ಭಾರತಕ್ಕೆ ಮರಳಿದರು. ರಾಮಾನುಜನ್‌ರ ದೇಹಸ್ಥಿತಿಯು ಇನ್ನೂ ಹೆಚ್ಚು ಹೆಚ್ಚು ಕೆಡಲಾರಂಭಿಸಿ ಅವರ ಶುಶ್ರೂಷೆಗಾಗಿ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿ ಕೊನೆಗೆ 1920ರ ಏಪ್ರಿಲ್ 26ರಂದು ಸೋಮವಾರ ರಾಮಾನುಜನ್‌ರವರ ದೇಹಾಂತ್ಯವಾಯಿತು. ಆಗ ಅವರಿಗೆ ಕೇವಲ 33 ವರ್ಷಗಳು. ಅವರ ಬಹಳ ಪ್ರೀತಿಪಾತ್ರರಾಗಿದ್ದ ವೃದ್ಧ ತಾಯಿ ಕೋಮಲತ್ತಮ್ಮಾಳ್ ಶೋಕ ತಪ್ತರಾದರು. ಕೇವಲ 20ವರ್ಷದ ನತದೃಷ್ಟ ಧರ್ಮಪತ್ನಿ ಜಾನಕಿಯಮ್ಮಳ್ ವಿಧವೆಯಾದರು. ಅವರ ಪತ್ನಿ ಜಾನಕಿಯಮ್ಮಳ್ ಚೆನೈ ನಗರದ ಸಮೀಪವೇ ಇದ್ದು, 94 ವರ್ಷಗಳ ಕಾಲ ಬದುಕಿದ್ದ ಅವರು 1994ರಲ್ಲಿ ನಿಧರಾದರು. ಹೀಗೆ ರಾಮಾನುಜನ್ ಎಂಬ ಜಗದ್ವಿಖ್ಯಾತವಾದ ಒಂದು ಅಪೂರ್ವ ಗಣಿತ ಪ್ರತಿಭೆಯ ದೀಪ ನಂದಿತು. ✍ ಡಾ.ಡಿ.ಸಿ.ರಾಮಚಂದ್ರ, ಲೇಖಕರು ಹಾಗೂ ಉಪನ್ಯಾಸಕರು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.