NEWS

Flower Show: ಬೆಳಗಾವಿಯಲ್ಲಿ ಗಮನ ಸೆಳೆದ ಫಲಪುಷ್ಪ ಪ್ರದರ್ಶನ

ವಿಡಿಯೋ ಇಲ್ಲಿ ನೋಡಿ ಬೆಳಗಾವಿ: ಬೆಳಗಾವಿಯಲ್ಲಿ(Belagavi) 65ನೇ ಫಲಪುಷ್ಪ ಪ್ರದರ್ಶನ(Flower Show) ಏರ್ಪಡಿಸಲಾಗಿದ್ದು, ವೀಕ್ಷಿಸಲು ಜನರು ಮುಗಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ(Citizens) ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳಷ್ಟು ಸಂಖ್ಯೆಯಲ್ಲಿ ಜನ ಆಗಮಿಸಿ ಇಲ್ಲಿನ ವಿಶಿಷ್ಟ ಕಲಾಕೃತಿಗಳನ್ನು ಕಣ್ತುಂಬಿಕೊಂಡು, ಅಲಂಕಾರಿಕ ಸಸಿಗಳನ್ನು ಖರೀದಿಸಿದರು. ಜಿಲ್ಲೆಯ ಹ್ಯೂಮ್ ಪಾರ್ಕ್‌ನಲ್ಲಿ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಜಿ.ಪಂ, ಜಿಲ್ಲಾ ತೋಟಗಾರಿಕಾ ಸಂಘ ಹಾಗೂ ಜಿಲ್ಲಾ ಕೃಷಿಕ ಸಮಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ 65ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸಿರಿಧಾನ್ಯಗಳಲ್ಲಿ ಗಾಂಧೀಜಿ, ಬಣ್ಣ ಬಣ್ಣದ ಹೂವುಗಳಲ್ಲಿ ಅರಳಿದ ಐಫೆಲ್ ಟವರ್, ಸಿರಿಧಾನ್ಯದಲ್ಲಿ ಅರಳಿರುವ ಧ್ಯಾನಸ್ಥರಾಗಿ ಕುಳಿತ‌ ಮಹಾತ್ಮ ಗಾಂಧಿ, ಗುರು ಮಡಿವಾಳೇಶ್ವರ ಕಲಾಕೃತಿಗಳು, ಚರಕ ನೇಯುತ್ತಿರುವ ಬಾಪೂಜಿ ಮೂರ್ತಿ, ಅದೇ ರೀತಿ ಗುಲಾಬಿ, ಸೇವಂತಿ, ಜರ್ಬೇರಾ, ಆರ್ಕಿಡ್ಸ್ ಬಣ್ಣ ಬಣ್ಣದ ಹೂವುಗಳಿಂದ ತಲೆ ಎತ್ತಿರುವ ಪ್ಯಾರಿಸ್​ ‘ಐಫೆಲ್ ಟವರ್’, ರಂಗೋಲಿಯಲ್ಲಿ ಬಿಡಿಸಿರುವ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್‌ಚಂದ್ರ ಬೋಸ್ ಅವರ ಭಾವಚಿತ್ರಗಳು, ಕೆಟ್ಟದ್ದನ್ನು ನೋಡಬಾರದು-ಕೇಳಬಾರದು-ಮಾತಾಡಬಾರದು ಎಂಬ ಸಂದೇಶ ಸಾರುವ ಮೂರು ಮಂಗಗಳ ಜೊತೆಗೆ ಕೆಟ್ಟದ್ದನ್ನು ಮೊಬೈಲ್‌ನಲ್ಲಿ ನೋಡಬಾರದು ಎಂದು ಎಚ್ಚರಿಸುವ ಮತ್ತೊಂದು ಮಂಗನ ಮೂರ್ತಿ ನೋಡುಗರನ್ನು ಸೆಳೆಯುತ್ತಿದೆ. ಇದನ್ನೂ ಓದಿ: Dakshina Kannada: ಸುಳ್ಯದ ಬಿಳಿನೆಲೆಯ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯರಿಂದ ಸುವರ್ಣಸೌಧದಲ್ಲಿ ‘ಅನುಭವ ಮಂಟಪ’ದ ಪಾಠ ಅದೇ ರೀತಿ ಬೇಟಿ ಬಚಾವೋ-ಬೇಟಿ ಪಡಾವೋ ಸಂದೇಶ ಸಾರುವ ಕಲಾಕೃತಿ, ಮೈಸೂರಿನ ಕಲಾವಿದೆ ಗೌರಿ ಅವರು ಮರಳಿನಲ್ಲಿ ವನ್ಯಜೀವಿಗಳನ್ನು ಚಿತ್ರಿಸಿದ್ದು ಎಲ್ಲರನ್ನೂ ಆಕರ್ಷಿಸುತ್ತಿವೆ. ಕುಟುಂಬ ಸಮೇತರಾಗಿ ಆಗಮಿಸಿದ ಜನರು ಈ ಕಲಾಕೃತಿಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಇಟ್ಟಿದ್ದ ಗುಲಾಬಿ, ಸೇವಂತಿ, ಚೆಂಡು ಹೂವು, ಜರ್ಬೆರಾ, ಅಂಥೂರಿಯಂ, ಆರ್ಕಿಡ್ಸ್, ಸಾಲ್ವಿಯಾ, ಪೆಟೂನಿಯಾ, ಜಿರೇನಿಯಂ, ಡಯಾಂತಸ್, ಹೈಪೋಸ್ಟಸ್, ಬೊನ್ಸಾಯಿ, ಸೆಕ್ಯುಲೆಂಟ್, ಹಣ್ಣು, ತರಕಾರಿ, ಪ್ಲಾಂಟೇಶನ್ ಸೇರಿ ವಿವಿಧ ರೀತಿಯ ಅಲಂಕಾರಿಕ ಹೂವು ಮತ್ತು ಹೂವಿನ ಸಸಿಗಳು, ಸಾವಯವ ಎರೆಹುಳು ಗೊಬ್ಬರ, ಕೊಕೊಫಿಟ್, ಅಲಂಕಾರಿಕ ಕುಂಡಗಳು, ಕೃಷಿ ಸಲಕರಣೆಗಳು ಇದ್ದವು. ಪರಿಸರ ಪ್ರೇಮಿಗಳು‌ ಮುಗಿಬಿದ್ದು ತಮಗೆ ಬೇಕಿರುವುದನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ರೈತರ ಅನುಕೂಲಕ್ಕಾಗಿ ಸೋಲಾರ್ ಮೋಟಾರ್ ಮತ್ತು ಪ್ಯಾನಲ್ 3 ರಿಂದ 5 HP ವರೆಗೆ 1 ಲಕ್ಷ ರೂ. ಸಬ್ಸಿಡಿ, 5-10 HP ವರೆಗೆ 1.5 ಲಕ್ಷ ಸಬ್ಸಿಡಿ ನೀಡಲಾಗುತ್ತಿದೆ. ಅದೇ ರೀತಿ ಅಟೋಮೆಟೆಡ್ ವೆದರ್ ಸ್ಟೇಶನ್ ಕೂಡ ಮಾರಾಟಕ್ಕೆ ಇಡಲಾಗಿದೆ. ಅಲ್ಲದೇ ಮೀನು ಮತ್ತು ಜೇನು ಕೃಷಿ ಬಗ್ಗೆಯೂ‌ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಯ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಕ್ಕಳಿಗೆ ವಿವಿಧ ರೀತಿಯ ಹೂವಿನ ಸಸಿಗಳ ಪರಿಚಯ ಮಾಡಲಾಯಿತು. ಜನರು ಪ್ರದರ್ಶನಕ್ಕೆ ಕಾಲಿಡುತ್ತಿದ್ದಂತೆ ಗಾಂಧೀಜಿ ದರ್ಶನ ಸಿಗುತ್ತದೆ. ಮರಳಿನಲ್ಲಿ ಬಿಡಿಸಿರುವ ಚಿತ್ರ, ರಂಗೋಲಿಯಲ್ಲಿ ತೆಗೆದಿರುವ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಸೇರಿ ಕರ್ನಾಟಕದ ಸಂಸ್ಕೃತಿಯನ್ನು ಇಲ್ಲಿ ಬಿಂಬಿಸಲಾಗಿತ್ತು. ಒಟ್ಟಾರೆ ಬೆಳಗಾವಿ ಕಲಾಪ ವೀಕ್ಷಣೆಗೆ ಆಗಮಿಸಿದ ಜನರಿಗೆ ಫಲ ಪುಷ್ಪ ಪ್ರದರ್ಶನ ಮತ್ತೊಂದು ಲೋಕಕ್ಕೆ ಕರೆದೊಯ್ಯುವಂತೆ ಮಾಡಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.