NEWS

Weekend Plan: ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ- ಈ ವೀಕೆಂಡ್‌ನಲ್ಲಿ ಕಾಲ ಕಳೆಯೋಕೆ ಮಸ್ತ್‌ ಜಾಗ ಇದು!

ವಿಡಿಯೋ ಇಲ್ಲಿ ನೋಡಿ ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು(Chikkamagaluru) ಫೇಮಸ್ ಆಗಿರೋದೇ ಈ 2 ವಿಷಯಕ್ಕೆ. ಒಂದು ಇಲ್ಲಿರುವ ಅತಿ ಸುಂದರ ಪ್ರಕೃತಿ ಸೌಂದರ್ಯ. ಇನ್ನೊಂದು ಇಲ್ಲಿ ಸಿಗುವ ಅದ್ಭುತ ರುಚಿಯ ಕಾಫಿ(Coffee),. ಇಂತಹ ಕಾಫಿನಾಡು ಚಿಕ್ಕಮಗಳೂರಲ್ಲಿ ಇದೊಂದು ಬೆಟ್ಟ(Hill) ಮಾತ್ರ ಜನರನ್ನ ಆಕರ್ಷಣೆ ಮಾಡುತ್ತಲೇ ಇದೆ. ಹಾಗಾದ್ರೆ ಆ ಬೆಟ್ಟ ಯಾವುದು ಅಂತೀರಾ ಈ ಸ್ಟೋರಿ ನೋಡಿ.. ಬ್ಯುಸಿ ಲೈಫ್‍ನ ಜಂಜಾಟದಿಂದ ಹೊರಬರಲು ಪ್ರಕೃತಿ ಸೌಂದರ್ಯ ಸವಿಯಬೇಕೆ? ಹಾಗಿದ್ರೆ ಚಿಕ್ಕಮಗಳೂರು ಜಿಲ್ಲೆಗೆ ಒಂದು ಬಾರಿ ಭೇಟಿ ಕೊಡಿ. ಅಲ್ಲಿ ವಿವಿಧ ಪ್ರವಾಸಿ ಸ್ಥಳಗಳಿವೆ. ಹಚ್ಚ ಹಸಿರಿನ ತಂಪಿಗೆ ಮೈ ಒಡ್ಡಿ ನಿಂತರೆ ನಿಮ್ಮೆಲ್ಲಾ ಒತ್ತಡಗಳು ನಿವಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪ್ರವಾಸಿ ಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಬೆಟ್ಟವೂ(Mullayyanagiri Hill) ಒಂದು. ಚಿಕ್ಕಮಗಳೂರಿಗೆ ಲ್ಯಾಂಡ್ ಮಾರ್ಕ್‍ನಂತಿರುವ ಈ ಶಿಖರವು ಮಳೆಗಾಲದಿಂದ ಚಳಿಗಾಲದವರೆಗೆ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು 6,330 ಅಡಿ ಎತ್ತರವಿದ್ದು, ಹಿಮಾಲಯ ಮತ್ತು ನೀಲಗಿರಿ ಪರ್ವತ ಶ್ರೇಣಿಗಳ ನಡುವಿನ ಅತಿ ಎತ್ತರದ ಪ್ರದೇಶವಾಗಿದೆ. ಮುಳ್ಳಯ್ಯನಗಿರಿ ಚಿಕ್ಕಮಗಳೂರಿನಿಂದ ಸುಮಾರು 20 ಕಿಲೋ‌ ಮೀಟರ್ ದೂರದಲ್ಲಿದ್ದು, ಬೆಟ್ಟದ ತುದಿಯವರೆಗೆ ಉತ್ತಮವಾದ ರಸ್ತೆಯಿದೆ. ರಸ್ತೆ ಕಿರಿದಾದ್ದರಿಂದ ಈ ರಸ್ತೆ ಅಪಾಯಕಾರಿ ರಸ್ತೆಯೂ ಹೌದು. ಇದನ್ನೂ ಓದಿ: Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪಸಂಸ್ಕಾರಕ್ಕಿದೆ ಅತೀ ಮಹತ್ವ! ಗಿರಿಯ ತುದಿಯಲ್ಲಿ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿದ ಗದ್ದುಗೆ ಹಾಗೂ ದೇವಾಲಯವಿದೆ. ಪುಟ್ಟದಾದ ಬಸವನ ಪ್ರತಿಮೆ ಹಾಗೂ ಪಕ್ಕದಲ್ಲಿ ಗುಹೆಯಂತಹ ರಚನೆಯಿದೆ. ಗದ್ದುಗೆ ಇರುವ ಜಾಗವನ್ನು ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಬೇಕು. ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಮೋಡವನ್ನು ಚುಂಬಿಸುವಷ್ಟರ ಮಟ್ಟಿಗೆ ಮಂಜು ಆವರಿಸುತ್ತದೆ. ಮೋಡಗಳ ನಡುವೆ ಚಲಿಸುತ್ತಿದ್ದರೆ ಸ್ವರ್ಗದ ದಾರಿಯಲ್ಲಿ ಚಲಿಸುತ್ತಿದ್ದೇವೆಯೇನೋ ಎಂಬ ಅನುಭವ ಎದುರಾಗುತ್ತದೆ. ನಮ್ಮ ಪಕ್ಕದಲ್ಲಿರುವ ವ್ಯಕ್ತಿ/ವಸ್ತುಗಳೇ ಕಾಣದಷ್ಟು ಮಂಜು ಆವರಿಸುವ ಮೂಲಕ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಬೆಟ್ಟದ ತುತ್ತತುದಿಯಲ್ಲಿರುವ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಿದ್ದರೆ ಸುಯ್ಯನೆ ಬೀಸುವ ಗಾಳಿ ಎಲ್ಲಿ ನಮ್ಮನ್ನೇ ಹೊತ್ತೊಯ್ಯುತ್ತದೆಯೋ ಎನ್ನುವ ಭೀತಿ ಕೂಡ ಕಾಡಲಾರಂಭಿಸುತ್ತದೆ. ಆ ಪ್ರಮಾಣದಲ್ಲಿ ಇಲ್ಲಿ ಗಾಳಿ ಬಿರುಸಾಗಿರುತ್ತದೆ. ಈ ವೇಳೆ ನಮಗೆ ಕಾಣಸಿಗುವ ಗಿರಿ-ಕಂದರಗಳು, ಪ್ರಪಾತಗಳು ಭಯದೊಂದಿಗೆ ಅಪೂರ್ವ ಖುಷಿಯನ್ನು ಕೂಡ ಉಂಟು ಮಾಡುತ್ತವೆ. ಚಾರಣ ಪ್ರಿಯರ ಸ್ವರ್ಗವೆನಿಸಿಕೊಂಡಿರುವ ಮುಳ್ಳಯ್ಯನಗಿರಿ ದಕ್ಷಿಣ ಭಾರತದಲ್ಲೇ ಪ್ರಮುಖ ಚಾರಣ ಸ್ಥಳಗಳಲ್ಲೊಂದು. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 20 ಕಿಲೋ ಮೀಟರ್‌ ದೂರದಲ್ಲಿರುವ ಮುಳ್ಳಯ್ಯನಗಿರಿಗೆ ಸರಕಾರಿ ಬಸ್ ಸೌಲಭ್ಯ ಇಲ್ಲ. ಚಿಕ್ಕಮಗಳೂರು ಜಿಲ್ಲೆಯಿಂದ ಇಲ್ಲಿಗೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆಯೂ ಇದೆ. ಸ್ವಂತ ವಾಹನಗಳು ಇಲ್ಲದ ಮಂದಿ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಈ ಸ್ಥಳವನ್ನು ತಲುಪಬಹುದು. ಮುಳ್ಳಯನಗಿರಿ ಟ್ರಿಪ್ ಹೋಗ ಬಯಸುವವರು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳೊಳಗೆ ಹೋಗುವುದು ಒಳ್ಳೆಯದು. ಈ ಸಮಯದಲ್ಲಿ ಬೆಟ್ಟದ ತುದಿಯಲ್ಲಿ ನಿಂತರೆ ಬಿರುಸಾದ ಗಾಳಿ, ಬಿಸಿಲಿನಲ್ಲೂ ಚಳಿಯ ಅನುಭವ ನೀಡುತ್ತದೆ. ಒಟ್ಟಿನಲ್ಲಿ ಜೀವನದಲ್ಲಿ ಒಮ್ಮೆಯಾದ್ರು ಇಂತಹ ಅತ್ಯದ್ಭುತ ಸ್ಥಳವನ್ನು ನೋಡಲೇಬೇಕು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.