NEWS

Air India: 2 ಗಂಟೆ ಆಕಾಶದಲ್ಲಿ ವಿಮಾನ ಸುತ್ತಾಟ, 141 ಪ್ರಯಾಣಿಕರನ್ನು ಸೇಫ್ ಮಾಡಿದ್ದ ಲೇಡಿ ಪೈಲಟ್! ಮಗಳ ಸಾಧನೆ ಬಗ್ಗೆ ಪೋಷಕರು ಹೇಳಿದ್ದೇನು?

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಅಕ್ಟೋಬರ್ 12 ರಂದು, 141 ಪ್ರಯಾಣಿಕರೊಂದಿಗೆ ತಿರುಚಿರಾಪಳ್ಳಿಯಿಂದ ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು (Air India Express Flight) ತಾಂತ್ರಿಕ ದೋಷವನ್ನು ಅನುಭವಿಸಿತು. ಈ ಪರಿಣಾಮವಾಗಿ ವಿಮಾನವು ತಿರುಚಿರಾಪಳ್ಳಿಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸುವ ಮುನ್ನ ಇಂಧನ ತೂಕವನ್ನು ಕಡಿಮೆ ಮಾಡಲು ಆಕಾಶದಲ್ಲಿ ಸುತ್ತಬೇಕಾಗಿತ್ತು. ಹೆಚ್ಚಿನ ಸವಾಲು ಹಾಗೂ ಅಪಾಯವನ್ನೊಳಗೊಂಡಿದ್ದ ಈ ಕಾರ್ಯವನ್ನು ಪೈಲಟ್‌ಗಳು ಸುರಕ್ಷಿತವಾಗಿ ನಿರ್ವಹಿಸಿದರು ಹಾಗೂ ಟೇಕ್ ಆಫ್ ಆಗಿ ಮೂರು ಗಂಟೆಗಳ ನಂತರ ವಿಮಾನವನ್ನು ಲ್ಯಾಂಡ್ ಮಾಡಿದರು. ಪೈಲಟ್‌ಗಳ ಈ ಕಾರ್ಯವನ್ನು ಸಾಮಾಜಿಕ ತಾಣದಲ್ಲಿ (Social Media) ಕೊಂಡಾಡಲಾಗಿದ್ದು, ಪೈಲಟ್‌ಗಳ ಸಮಯೋಚಿತ ಕಾರ್ಯಕ್ಕೆ ಶ್ಲಾಘನೆ ದೊರೆತಿದೆ. ತಮಿಳು ನಾಡು ಗವರ್ನರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಪೈಲಟ್‌ಗಳಿಗೆ ಧನ್ಯವಾದ ಅರ್ಪಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೈಲಟ್‌ಗಳಲ್ಲೊಬ್ಬರಾದ ಮೈತ್ರೇಯಿ ಯಾರು? ಪೈಲಟ್‌ಗಳಲ್ಲೊಬ್ಬರಾದ ಮೈತ್ರೇಯಿ ದಂಪತಿ ಶ್ರೀಕೃಷ್ಣ ಹಾಗೂ ರುಕ್ಮಿಣಿ ಶಿಟೋಲೆ ಅವರ ಹಿರಿಯ ಪುತ್ರಿಯಾಗಿದ್ದಾರೆ. ಮೂಲತಃ ದೌಂಡ್‌ನವರಾದ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ. ಇದನ್ನೂ ಓದಿ: ಮರಳಿ ಬಿಜೆಪಿ ಜೊತೆ ಸೇರುತ್ತಾರಾ ಉದ್ಧವ್ ಠಾಕ್ರೆ? ‘ಮಹಾ’ ಎಲೆಕ್ಷನ್ ಹೊತ್ತಲ್ಲೇ ಕಾಂಗ್ರೆಸ್‌ಗೆ ಶಾಕ್! ಶ್ರೀಕೃಷ್ಣ ಸಾರಿಗೆ ಮತ್ತು ಕ್ರೇನ್ ವ್ಯವಹಾರ ನಡೆಸುತ್ತಿದ್ದರೆ, ರುಕ್ಮಿಣಿ ಖೇಡ್-ಶಿವಾಪುರದಲ್ಲಿ ಪೇಪರ್ ಟ್ಯೂಬ್ ತಯಾರಿಕಾ ಕಾರ್ಖಾನೆಯನ್ನು ನಿರ್ವಹಿಸುತ್ತಿದ್ದಾರೆ. ಮೈತ್ರೇಯಿಗೆ ಚಿಕ್ಕಂದಿನಿಂದಲೇ ಪೈಲಟ್ ಆಗಬೇಕೆಂಬ ಕನಸಿತ್ತು ಎಂಬುದಾಗಿ ಅವರ ತಂದೆ ಶ್ರೀಕೃಷ್ಣ ತಿಳಿಸಿದ್ದು, ಒಮ್ಮೆ ದೆಹಲಿಯಿಂದ ಪುಣೆಗೆ ವಿಮಾನ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ವಿಮಾನವನ್ನು ಮಹಿಳಾ ಪೈಲಟ್‌ಗಳು ಚಲಾಯಿಸುತ್ತಿದ್ದರು ಹಾಗೂ ಅವರು ಮೈತ್ರೇಯಿಗೆ ಕಾಕ್‌ಪಿಟ್‌ ಪ್ರವೇಶಿಸಲು ಅವಕಾಶ ನೀಡಿದರು. ಆಗಿನಿಂದಲೇ ಮಗಳಿಗೆ ಪೈಲಟ್ ಆಗಬೇಕೆಂಬ ಕನಸಿತ್ತು ಹಾಗೂ ತನ್ನ ಇಚ್ಛೆಯನ್ನು ಆಕೆ ತಿಳಿಸಿದ್ದರು ಎಂದು ತಂದೆ ಹೇಳಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ಮೈತ್ರೇಯಿ ಮೈತ್ರೇಯಿ ತಮ್ಮ ಶಾಲಾ ಶಿಕ್ಷಣವನ್ನು ಸಿನ್ಹಗಡ್ ಸ್ಪ್ರಿಂಗ್‌ಡೇಲ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಆಕೆ ಎಳವೆಯಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ತಮ್ಮ ಹತ್ತನೇ ತರಗತಿಯ ನಂತರ ಮೂಲಭೂತ ಗಗನಯಾತ್ರಿ ತರಬೇತಿಯನ್ನೊಳಗೊಂಡಿದ್ದ ಮೈತ್ರೇಯಿ ನಾಸಾ ಪ್ರವಾಸಕ್ಕೂ ಆಯ್ಕೆಯಾಗಿದ್ದರು ಹಾಗೂ ಅಲ್ಲಿಯೂ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ದೃಷ್ಟಿ ಸಮಸ್ಯೆ ಪೈಲಟ್ ಆಗಬೇಕೆಂಬ ತಮ್ಮ ಕನಸನ್ನು ಪೋಷಿಸುತ್ತಾ ಬಂದಿದ್ದ ಮೈತ್ರೇಯಿಗೆ ಮೊದಲ ಅಡಚಣೆ ಎದುರಾಯಿತು. ಹತ್ತನೇ ತರಗತಿಯ ನಂತರ ವಿಜ್ಞಾನ ಶಿಕ್ಷಣವನ್ನು ಆರಿಸಿಕೊಂಡಿದ್ದ ಮೈತ್ರೇಯಿಗೆ, ಪೈಲಟ್ ಆಗಲು ಪರಿಪೂರ್ಣ ದೃಷ್ಟಿ ಅಗತ್ಯ ಎಂದು ತಿಳಿಸಲಾಯಿತು. ಮೈತ್ರೇಯಿ ಆ ಸಮಯದಲ್ಲಿ ಕನ್ನಡಕ ಬಳಸುತ್ತಿದ್ದರು ಹಾಗೂ ಇಂದಿನಂತೆ ಇಂಟರ್ನೆಟ್‌ನ ಪ್ರವೇಶ ಸುಲಭವಾಗಿಲ್ಲದ ಕಾರಣ ಆ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳಲಾಗಲಿಲ್ಲ ಎಂದು ಶ್ರೀಕೃಷ್ಣ ತಿಳಿಸಿದ್ದಾರೆ. ಅಲ್ಲದೆ ಮರಾಠ ಮನೆಗಳಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳು 21-22 ವಯಸ್ಸಿನವರಾದಾಗ ವಿವಾಹ ಮಾಡಿಕೊಡಲಾಗುತ್ತದೆ ಹಾಗಾಗಿ ಆಕೆಗೆ ಮಾರ್ಗದರ್ಶನ ನೀಡುವವರು ಯಾರೂ ಇರಲಿಲ್ಲ. ಹೀಗಾಗಿ ಪೈಲಟ್ ಆಗಬೇಕೆಂಬ ತನ್ನ ಕನಸನ್ನು ತ್ಯಜಿಸಿ ಫರ್ಗುಸನ್ ಕಾಲೇಜಿನಲ್ಲಿ ಬಿಎಸ್‌ಸಿ ಆಯ್ಕೆಮಾಡಿಕೊಂಡಳು. ತದನಂತರ ಮಗಳ ದೃಷ್ಟಿ ಸ್ವೀಕಾರಾರ್ಹವಾಗಿದೆ ಎಂಬುದು ತಿಳಿದೊಡನೆ ಪದವಿ ಮುಗಿಸಿದೊಡನೆ ಪೈಲಟ್ ತರಬೇತಿಗೆ ಆಕೆಯನ್ನು ಕಳುಹಿಸಿದೆವು ಎಂದು ಶ್ರೀಕೃಷ್ಣ ತಿಳಿಸಿದ್ದಾರೆ. ಅರ್ಹತೆ ಪಡೆದು ಪೈಲಟ್ ಪರವಾನಗಿ ಗಳಿಸಿದ ಮೈತ್ರೇಯಿ ನ್ಯೂಜಿಲೆಂಡ್‌ನ ಡ್ಯುನೆಡಿನ್‌ನಲ್ಲಿರುವ ಮೈನ್‌ಲ್ಯಾಂಡ್ ಏವಿಯೇಷನ್ ​​ಕಾಲೇಜಿನಿಂದ ಮೈತ್ರೇಯಿ ತನ್ನ ವಾಣಿಜ್ಯ ಪೈಲಟ್ ಪರವಾನಗಿಯನ್ನು ಪಡೆದರು. ಅಕ್ಟೋಬರ್ 12 ರಂದು ಶಾರ್ಜಾಕ್ಕೆ ವಿಮಾನವು ತಾಂತ್ರಿಕ ದೋಷವನ್ನು ಎದುರಿಸಿದಾಗ, ಮೈತ್ರೇಯಿಯ ಕಿರಿಯ ಸಹೋದರಿ ಜರ್ಮನಿಗೆ ಅಧ್ಯಯನಕ್ಕಾಗಿ ತೆರಳುತ್ತಿದ್ದರು. ಹಾಗಾಗಿ ಮೈತ್ರೇಯಿಯ ಪೋಷಕರು ಕಿರಿಯ ಮಗಳತ್ತಲೇ ಹೆಚ್ಚು ಗಮನಹರಿಸಿದ್ದರು. ಈ ವಿಷಯದ ಬಗ್ಗೆ ಮೈತ್ರೇಯಿ ಪೋಷಕರಿಗೆ ತಿಳಿದಿರಲಿಲ್ಲ ಆದರೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ಸ್ವತಃ ಮೈತ್ರೇಯಿಯವರೇ ತಮ್ಮ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ಹೆಮ್ಮೆ ಇದೆ ತಮ್ಮ ಮಗಳು ಹೇಳುತ್ತಿದ್ದ ಸುದ್ದಿಯನ್ನೇ ಅರಗಿಸಿಕೊಳ್ಳಲು ಸಮಯ ಹಿಡಿಯಿತು ನಂತರ ಆಕೆಯೇ ತನ್ನ ತಂದೆಗೂ ವಿಷಯ ತಿಳಿಸಿದಳು ಎಂದು ಮೈತ್ರೇಯಿ ಅಮ್ಮ ತಿಳಿಸಿದ್ದಾರೆ. ಮಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ತಾಳ್ಮೆ ಹಾಗೂ ಪ್ರಶಾಂತ ಮನಸ್ಸಿನಿಂದ ಸುರಕ್ಷಿತವಾಗಿ ಆಕೆ ವಿಮಾನವನ್ನು ಲ್ಯಾಂಡ್ ಮಾಡಿದ್ದಾಳೆ. ಪೈಲಟ್ ಆಗಿ ಆಕೆಗೆ ಕೆಲಸ ದೊರೆತಾಗ ವಿಮಾನ ಪ್ರಯಾಣ ಮಾಡುವ ಸಾವಿರಾರು ಜನರ ಜೀವ ನಿನ್ನ ಕೈಯಲ್ಲಿದೆ ಎಂದು ತಿಳಿಸಿದ್ದೆವು. ಸಾಕಷ್ಟು ಜವಾಬ್ದಾರಿಯುತವಾಗಿರುವ ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸೂಚಿಸಿದ್ದೆವು. ಆಕೆ ಅದನ್ನು ಸಾಬೀತುಪಡಿಸಿದ್ದಾಳೆ ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮೈತ್ರೇಯಿ ತಾಯಿ ರುಕ್ಮಿಣಿ ತಿಳಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.