NEWS

Belagavi: ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ₹8 ಕೋಟಿ ದೇಣಿಗೆ; ಇದು ಅಮೆರಿಕದಲ್ಲಿರುವ ಕನ್ನಡಿಗನ ಔದಾರ್ಯ!

ಡಾ.ಸಂಪತ್ತಕುಮಾರ ಶಿವಣಗಿ ಬೆಳಗಾವಿ: ಕೆ ಎಲ್ ಇ ಸಂಸ್ಥೆಯು (KLE Institute) ಅತ್ಯಾಧುನಿಕ‌ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆಯನ್ನು (Cancer Hospital) ಬೆಳಗಾವಿಯಲ್ಲಿ (Belagavi) ನಿರ್ಮಿಸಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ಬೆಳಗಾವಿ ಜಿಲ್ಲೆಯ ಪ್ರಸಿದ್ಧ ವೈದ್ಯರೊಬ್ಬರು 8 ಕೋಟಿ ರೂಪಾಯಿ ದೇಣಿಗೆ (Donation) ನೀಡಿದ್ದಾರೆ. ವಿಶೇಷ ಎಂದರೆ ಅವರ ಹೆಸರನ್ನೇ ಇಟ್ಟಿರುವ ಆ ಆಸ್ಪತ್ರೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಜನವರಿ 03 ರಂದು ಲೋಕಾರ್ಪಣೆ ಮಾಡಿದ್ದಾರೆ. ಬಿಗಿದಪ್ಪಿಕೊಂಡ ವಿಶ್ವದ ದೊಡ್ಡಣ್ಣ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಡಾ.ಸಂಪತ್ತಕುಮಾರ ಶಿವಣಗಿ ಅವರೇ ಕೆ ಎಲ್ ಇ‌ ಕ್ಯಾನ್ಸರ್ ಆಸ್ಪತ್ರೆಗೆ 8 ಕೋಟಿ ಕೊಟ್ಟ ದಾನಿ. ಹೆಸರಿನಲ್ಲಿ ಹೇಗೆ ಸಂಪತ್ತಿದೆಯೋ ಅದೇ ರೀತಿ ಹಣ, ಜ್ಞಾನ ಮತ್ತು ಹೃದಯ ಶ್ರೀಮಂತಿಕೆ ಇವರಲ್ಲಿ ಮೇಳೈಸಿದೆ. ಇವರಲ್ಲಿನ ಅಪ್ರತಿಮ ಪ್ರತಿಭೆಗೆ ವಿಶ್ವದ ದೊಡ್ಡಣ್ಣನೇ ಬಿಗಿದಪ್ಪಿಕೊಂಡಿದ್ದಾನೆ. ಡಾ. ಸಂಪತ್ತಕುಮಾರ ಅಮೆರಿಕದ ಹಲವು ಅಧ್ಯಕ್ಷರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಅಮೆರಿಕದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೆರೆದಿದ್ದಾರೆ. ಸದಾ ತಾಯ್ನಾಡಿಗೆ ಏನಾದರು‌ ಮಾಡಬೇಕು ಎನ್ನುವ ಅವರಲ್ಲಿನ ತುಡಿತ ಈಗ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಬರೊಬ್ಬರಿ‌ 8 ಕೋಟಿ ದೇಣಿಗೆ ನೀಡುವಂತೆ ಮಾಡಿದೆ. ಇದಕ್ಕೆ ಕೆಎಲ್ಇ ಡಾ‌.ಸಂಪತ್ತಕುಮಾರ ಎಸ್.ಶಿವಣಗಿ ಕ್ಯಾನ್ಸರ್ ಆಸ್ಪತ್ರೆ ನಾಮಕರಣ ಮಾಡಲಾಗಿದೆ. ಅಲ್ಲದೇ ಅಥಣಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಗೂ‌ 1 ಕೋಟಿ ರೂಪಾಯಿ ದೇಣಿಗೆ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಿಸ್ಸಿಸಿಪ್ಪಿ ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶಕರಾಗಿ ಸೇವೆ 1974-76ರಲ್ಲಿ‌ ದೇಶದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ ಪರಿಣಾಮ ಡಾ.ಸಂಪತ್ತಕುಮಾರ ಭಾರತ ಬಿಟ್ಟು ಅಮೆರಿಕಗೆ ಹೋಗಬೇಕಾಯಿತು. ಇದಕ್ಕೂ ಮೊದಲು ಎರಡು ವರ್ಷ ಬೆಳಗಾವಿಯ ಜವಾಹರಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಬಾಲ್ಟಿಮೋರ್ ಜಾನ್ಸ್ ಹಾಫ್ ಕಿನ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಫೆಲೋಶಿಪ್‌ ಮುಗಿಸಿದರು. ಅಮೆರಿಕದಲ್ಲೇ ಪ್ರಸಿದ್ಧ ವೈದ್ಯನಾಗಿ ಸಂಪತಕುಮಾರ ಹೊರ ಹೊಮ್ಮಿದರು. ಮಿಸ್ಸಿಸಿಪ್ಪಿ ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 84 ವರ್ಷದ ಡಾ.ಸಂಪತ್ತಕುಮಾರ ಅವರು ಕಳೆದ 45 ವರ್ಷಗಳಿಂದ ಅಮೆರಿಕದ ಮಿಸ್ಸಿಸಿಪ್ಪಿಯಲ್ಲಿ ನೆಲೆಸಿದ್ದಾರೆ. ಮಿಸ್ಸಿಸಿಪ್ಪಿಯ ಒಂದು ರಸ್ತೆಗೆ ಡಾ.ಸಂಪತ್ತಕುಮಾರ ಶಿವಣಗಿ ಹೆಸರು ಡಾ. ಸಂಪತ್ತಕುಮಾರ್ ಶಿವಣಗಿ, ಅಮೆರಿಕದ ಆರೋಗ್ಯ ಕ್ಷೇತ್ರಕ್ಕೆ ಇವರು ಅದ್ಭುತ ಕೊಡುಗೆ ನೀಡಿದ್ದಾರೆ. ಅಲ್ಲಿನ ಆರೋಗ್ಯ ಕ್ಷೇತ್ರ ಸುಧಾರಿಸುವ ಜೊತೆಗೆ ಹೊಸ ಯೋಜನೆಗಳಿಂದ ಬದಲಾವಣೆಯ ಗಾಳಿಯನ್ನೆ ಬೀಸಿದ್ದಾರೆ. ಅವರ ಕೊಡುಗೆಯನ್ನು ಗುರುತಿಸಿದ ಅಮೆರಿಕ ಸರ್ಕಾರವು ಮಿಸ್ಸಿಸಿಪ್ಪಿಯ ಒಂದು ರಸ್ತೆಗೆ ಡಾ.ಸಂಪತ್ತಕುಮಾರ ಶಿವಣಗಿ ಲೇನ್ ಹೆಸರಿಟ್ಟು ಗೌರವಿಸಿರುವುದು ಬೆಳಗಾವಿ, ಕರ್ನಾಟಕ ಮತ್ತು ಇಡೀ ಭಾರತ ದೇಶಕ್ಕೆ ಹೆಮ್ಮೆಯ ಸಂಗತಿ ಯಾಗಿದೆ. ಜಾರ್ಜ್ ಡಬ್ಲ್ಯು. ಬುಷ್ ಅಧ್ಯಕ್ಷರಾಗಿದ್ದಾಗ ಅಮೆರಿಕಾದ ವೈಟ್ ಹೌಸ್ ನಲ್ಲಿ ದೀಪಾವಳಿ ಹಬ್ಬ ಆಚರಿಸುವಲ್ಲಿ ಡಾ.ಶಿವಣಗಿ ಯಶಸ್ವಿಯಾಗಿದ್ದರು. ಅಂದು ಬುಷ್ ಅವರು 250 ಅನಿವಾಸಿ ಗಣ್ಯ ಭಾರತೀಯರನ್ನು ವೈಟ್ ಹೌಸ್ ಗೆ ಆಹ್ವಾನಿಸಿ, ಹೊಸ ಬಟ್ಟೆ ತೊಟ್ಟು, ದೀಪ ಬೆಳಗಿಸಿ ಅವರೊಂದಿಗೆ ಸಂಭ್ರಮಿಸಿದ್ದರು. ಇನ್ನು ಜಾಕ್ ಸನ್ ದಲ್ಲಿ ಹಿಂದೂ ದೇವಾಲಯವನ್ನು ಡಾ.ಸಂಪತ್ತಕುಮಾರ ಕಟ್ಟಿಸಿದ್ದಾರೆ. ಇದನ್ನೂ ಓದಿ: Uttara Kannada: ರಸ್ತೆ ಸುರಕ್ಷತಾ ನಿಯಮ ಪಾಲಿಸಿ ಅಪಘಾತ ತಪ್ಪಿಸಿ; ಸ್ಕೇಟಿಂಗ್ ಮೂಲಕ ವಿದ್ಯಾರ್ಥಿಗಳ ಜಾಗೃತಿ 2017ರಲ್ಲಿಯೇ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್ ಅವರಿಗೆ ಡಾ.ಶಿವಣಗಿ ಆಪ್ತರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿ ಅವರ ಸಂಪುಟದ ಹಲವು ಸಚಿವರ ಜೊತೆಗೂ ಉತ್ತಮ ಗೆಳೆತನ ಹೊಂದಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರವು “ಪ್ರವಾಸಿ ಭಾರತೀಯ ಸಮ್ಮಾನ್” ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಪದ್ಮಶ್ರೀಗೆ ಸಮಾನವಾದ ಪ್ರಶಸ್ತಿ. ಅಮೆರಿಕದಲ್ಲೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಅಮೆರಿಕದಲ್ಲಿ ನೆಲಸಿ ದಶಕಗಳೆ ಕಳೆದರೂ ತಾಯಿನಾಡಿದ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಇಲ್ಲಿನ ಜನರಿಗೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ಅವರ ಉದ್ದೇಶವಾಗಿದೆ. (ವರದಿ: ಚಂದ್ರಕಾಂತ ಸುಗಂಧಿ, ನ್ಯೂಸ್ 18, ಬೆಳಗಾವಿ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.