NEWS

Shirur Landslide: ಮೊದಲೇ ಹೀಗೆ ಮಾಡಿದ್ರೆ ಶಿರೂರಲ್ಲಿ ಭೂಕುಸಿತ ಆಗುತ್ತಿರಲಿಲ್ಲ!

ಇಲ್ಲಿ ವಿಡಿಯೋ ನೋಡಿ ಉತ್ತರ ಕನ್ನಡ: ಅಂಕೋಲಾದ ಶಿರೂರು ಭಾಗದಲ್ಲಾದ ಭೂಕುಸಿತ ಮತ್ತೊಮ್ಮೆ ಪ್ರಕೃತಿ ಮುನಿಸಿನ ಕುರಿತಂತೆ (Shiru Landslide) ವಿಮರ್ಶೆ ಮಾಡುವಂತೆ ಮಾಡಿದೆ. ಭೂಕುಸಿತ ತಜ್ಞರ ಪ್ರಕಾರ, ಇದೆಲ್ಲಕ್ಕೂ ಬಹುತೇಕ ಮಾನವನ ಹಸ್ತಕ್ಷೇಪ ಅರ್ಥಾತ್‌ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳೇ ಕಾರಣ. ಹಾಗಿದ್ರೆ ಇದನ್ನ ತಡೆಗಟ್ಟುವುದು ಹೇಗೆ ಅನ್ನೋದನ್ನ ನೈಸರ್ಗಿಕ ವಿಪತ್ತು ನಿರ್ವಹಣೆ ಮಾಜಿ ನಿರ್ದೇಶಕರಾದ ಡಾ. ಜಿ.ಎಸ್‌. ಶ್ರೀನಿವಾಸ್‌ ಅವರು ಈ ರೀತಿಯಾಗಿ ವಿವರಿಸುತ್ತಾರೆ. ಮಣ್ಣಿನ ಅಧ್ಯಯನ ಮುಖ್ಯ! ಕರಾವಳಿ, ಮಲೆನಾಡಿನ 23 ತಾಲ್ಲೂಕುಗಳು ಭೂಕುಸಿತಕ್ಕೆ ಒಳಗಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಿದೆ. ಅಭಿವೃದ್ಧಿ ಕಾರ್ಯ ಚಟುವಟಿಕೆ ನಡೆಸುವ ಮುನ್ನ ಮಣ್ಣಿನ ಗುಣದ ಬಗ್ಗೆ ಅಧ್ಯಯನ ಮಾಡಬೇಕಿರುವುದು ಅತ್ಯಗತ್ಯ. ಮಣ್ಣು, ಶಿಲೆಯ ರಚನೆ ಬಗ್ಗೆ ಕೂಲಂಕುಶವಾಗಿ ಅಧ್ಯಯನ ನಡೆಸದೇ ಅಭಿವೃದ್ಧಿ ಚಟುವಟಿಕೆಗಳು ನಡೆಸಕೂಡದು. ಯಾವುದೇ ಬೆಟ್ಟ, ಗುಡ್ಡ ಪ್ರದೇಶಗಳಲ್ಲಿ ನಡೆಸುವ ಅಭಿವೃದ್ಧಿ ಚಟುವಟಿಕೆಗೆ ಮುನ್ನ ಅಲ್ಲಿರುವ ಮಣ್ಣು ನಾವು ಮಾಡುವ ಅಭಿವೃದ್ಧಿ ಚಟುವಟಿಕೆಗೆ ಎಷ್ಟು ಪೂರಕವಾಗಿ ಅನ್ನೋದನ್ನ ಅಧ್ಯಯನ ನಡೆಸಬೇಕು. ಮನೆ ಕಟ್ಟುವಾಗಲೂ ಎಚ್ಚರ! ಇದು ಕೇವಲ ರಸ್ತೆ, ಹೆದ್ದಾರಿ ನಿರ್ಮಾಣಕ್ಕಷ್ಟೇ ಅಲ್ಲ. ನಗರ ಪ್ರದೇಶಗಳಲ್ಲಿ ಮನೆ, ಕಟ್ಟಡ ಕಟ್ಟಬೇಕಿದ್ರೂ ನಾವು ಅಲ್ಲಿನ ಮಣ್ಣಿನ ರಚನೆ, ಶಿಲಾ ರಚನೆ ಬಗ್ಗೆ ಅರಿತುಕೊಂಡು ಕೆಲಸ ಮಾಡಬೇಕು. ಯಾವ ಮಣ್ಣಿನಲ್ಲಿ ಯಾವ ಪ್ರಾಜೆಕ್ಟ್‌ ಮಾಡಬಹುದು ಅನ್ನೋದಕ್ಕೆ ನಿರ್ದಿಷ್ಟ ನಿಯಮಗಳಿವೆ. ಅದನ್ನ ಪಾಲಿಸಿದರೆ ಅನಾಹುತಗಳು ಸುಲಭವಾಗಿ ನಡೆಯದು. ಅಷ್ಟೇ ಅಲ್ಲ, ಭೂಪದರ ಹಾಗೂ ಕಾಡಿನ ಪೊದರೆಗಳು ಅಧಿಕವಾಗಿರುವ ಭೂಮಿ ಅಷ್ಟು ಸುಲಭವಾಗಿ ಕುಸಿತಕ್ಕೆ ಒಳಗಾಗದು. ಇದನ್ನೂ ಓದಿ: Uttara Kannada Landslide: ಭೂಕುಸಿತಕ್ಕೆ ಪ್ರಮುಖ ಕಾರಣ ಇದುವೇ ಅಂತಿದ್ದಾರೆ ತಜ್ಞರು! ಗುಡ್ಡ ಕಡಿಯುವಾಗ ಈ ನಿಯಮ ಪಾಲಿಸಬೇಕಿತ್ತು ಇನ್ನು ಗುಡ್ಡಗಳನ್ನ ಕಡಿಯಬೇಕಾದರೆ ಅಲ್ಲೊಂದಿಷ್ಟು ನಿಯಮಗಳನ್ನು ಪಾಲಿಸಲೇಬೇಕು. ಶೇಕಡಾ 90 ರಷ್ಟು ಗುಡ್ಡವನ್ನ ಕತ್ತರಿಸಿದರೆ ಅಪಾಯ ಸಾಧ್ಯತೆ ಹೆಚ್ಚು. ಇದಕ್ಕಾಗಿ ಗುಡ್ಡಗಳನ್ನು ಸ್ಲೋಪ್‌ ಮಾದರಿಯಲ್ಲಿ 45 ಡಿಗ್ರಿಗಿಂತ ಜಾಸ್ತಿ ಇರದಂತೆ ಕಡಿತ ಮಾಡಿದರೆ ಉತ್ತಮ. ಒಂದೊಮ್ಮೆ ಶೇಕಡಾ 60 ರಿಂದ 70 ಡಿಗ್ರಿಯಲ್ಲಿ ಇರಿಸಿ ಗುಡ್ಡಗಳನ್ನು ಸ್ಲೋಪ್‌ ಮಾಡುವುದು ಸರಿಯಲ್ಲ. ಇನ್ನು ಕಾಡು, ಗುಡ್ಡಗಳಲ್ಲಿ ಒಂದೇ ಜಾತಿಯ ಮರಗಳನ್ನು ನೆಡುವುದು ಕೂಡಾ ಸರಿಯಲ್ಲ. ವಿವಿಧ ಬಗೆಯ ಗಿಡಗಳನ್ನು ನೆಟ್ಟಾಗ ಅವುಗಳಿಂದ ಮಣ್ಣು ಬಲಿಷ್ಠವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಭೂಮಿಯ ಪದರ ಸಡಿಲವಾಗದಿರಲಿ ಇನ್ನು ಬೆಟ್ಟ, ಗುಡ್ಡಗಳ ಮೇಲೆ ಹೋಂ ಸ್ಟೇ, ಅರಣ್ಯ ಇಲಾಖೆ ಕಚೇರಿಗಳು ಅವುಗಳ ನಿರ್ವಹಣೆಗಾಗಿ ನೀರು ಸಂಗ್ರಹಿಸಲು ಹೊಂಡ, ಗುಂಡಿ ಅಥವಾ ತೊಟ್ಟಿಗಳನ್ನು ನಿರ್ಮಿಸುವುದು ಭೂಮಿಯ ಪದರ ಸಡಿಲಗೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಅಂತಹ ಚಟುವಟಿಕೆಗಳು ಘಟ್ಟ ಪ್ರದೇಶದ ಕಾಡುಗಳಲ್ಲಿ ನಡೆಯಲೇಬಾರದು. ಒಟ್ಟಿನಲ್ಲಿ ಪಶ್ಚಿಮ ಘಟ್ಟ, ಬೆಟ್ಟ, ಗುಡ್ಡ ಹಾಗೂ ಕಾಡುಗಳ ಮಧ್ಯೆ ಅಥವಾ ಅಂಚಿನಲ್ಲಿ ಯಾವುದೇ ಚಟುವಟಿಕೆ ಮಾಡಬೇಕಿದ್ದರೂ ಸಂಪೂರ್ಣ ಅಧ್ಯಯನ ನಡೆಸದ ಹೊರತು ಅಭಿವೃದ್ಧಿ ಚಟುವಟಿಕೆಗಳು ಕೈಗೊಳ್ಳಬಾರದು. ಹೀಗೆ ಆದಲ್ಲಿ ಮಾನವ ಹಸ್ತಕ್ಷೇಪದಿಂದ ನಡೆಯುವ ಶೇಕಡಾ 70ರಷ್ಟು ಭೂಕುಸಿತವನ್ನು ತಡೆಗಟ್ಟುವ ಅವಕಾಶವಿದೆ ಎಂದು ತಜ್ಞರು ತಿಳಿಸುತ್ತಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.